Top News

ಬೆಳ್ತಂಗಡಿ : ಉಜಿರೆ ಜಾತ್ರೆಯಲ್ಲಿ ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ; ಬಜರಂಗದಳ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು

ಬೆಳ್ತಂಗಡಿ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಪ್ರಾಪ್ತ ಮುಸ್ಲಿಂ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಘಟನೆಯ ವಿವರ:
ಉಜಿರೆಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಮಾರ್ಚ್ 11ರಂದು ತನ್ನ ಸ್ನೇಹಿತರೊಂದಿಗೆ ದೇವಸ್ಥಾನದ ಉತ್ಸವಕ್ಕೆ ತೆರಳಿದ್ದನು. ರಾತ್ರಿ ಸುಮಾರು 8:30ರ ಹೊತ್ತಿಗೆ ಸ್ನೇಹಿತರು ಜಾಯಿಂಟ್ ವ್ಹೀಲ್ ಸವಾರಿ ಮಾಡುತ್ತಿದ್ದಾಗ, ಬಾಲಕ ಅವರ ಮೊಬೈಲ್‌ಗಳನ್ನು ಹಿಡಿದುಕೊಂಡು ಕೆಳಗೆ ನಿಂತಿದ್ದನು. ಈ ವೇಳೆ ಅಲ್ಲಿಗೆ ಬಂದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರು ಬಾಲಕನ ಧರ್ಮದ ಬಗ್ಗೆ ವಿಚಾರಿಸಿದ್ದಾರೆ. ಆತ ಮುಸ್ಲಿಂ ಎಂದು ತಿಳಿದ ತಕ್ಷಣ ಆತನ ಮೇಲೆ ಮುಗಿಬಿದ್ದು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಬಾಲಕನ ಸ್ನೇಹಿತರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

​ಬೆದರಿಕೆ ಮತ್ತು ಕಿರುಕುಳ:
ಆರೋಪಿಗಳು ಬಾಲಕನ ಮೇಲೆ ಹಲ್ಲೆ ನಡೆಸುವುದಲ್ಲದೆ, ಅದನ್ನು ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ತಡರಾತ್ರಿ ಆತನನ್ನು ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿದ್ದು, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಇದರಿಂದ ತೀವ್ರವಾಗಿ ಭಯಗೊಂಡಿದ್ದ ಬಾಲಕ ಕೆಲವು ದಿನಗಳ ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾನೆ.

​ಕಾನೂನು ಕ್ರಮ:
ಮಾರ್ಚ್ 18ರಂದು ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪಹರಣ, ಗುಂಪು ಹಲ್ಲೆ, ಜೀವ ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ BNS 137(2), 115(2), 351(2), 352, 353(2) ಮತ್ತು 190 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Post a Comment

Previous Post Next Post