ಮಂಗಳೂರು : ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಲ್ಲಿ ಮಾನ್ಯತೆ ಪಡೆದ ಪ್ರಥಮ ಸ್ವಯಂ ಪ್ರೇರಿತ ಸಂಸ್ಥೆಯಾಗಿದ್ದು, ವಿವಿಧ ದೇಶಗಳಲ್ಲಿ ರೋಟರಿ ಸದಸ್ಯರು ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳಾದ ವಸತಿ, ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರ ಗಮನಾರ್ಹ ಸಮಾಜ ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಸ್ವಹಿತ ಮೀರಿದ ಸೇವೆ ನೀಡಿ ಸಂಸ್ಥೆಗೆ ಗೌರವ ಸಂಪಾದಿಸಿದ್ದಾರೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ರೋ.ಡಾ.ರವಿಶಂಕರ್ ರಾವ್ ಹೇಳಿದರು.
ಅವರು ರೋಟರಿ ಮಂಗಳೂರು ಸಿಟಿ ಸಂಸ್ಥೆ ವತಿಯಿಂದ ನಗರದ ಬಿಕರ್ನಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಲಲಿತ ಗೀತಾ ಅನಾಥಾಶ್ರಮಕ್ಕೆ ಸುಮಾರು 50,000/- ಮೌಲ್ಯದ ರೆಫ್ರಿಜಿರೇಟರ್ ಮತ್ತು ವಾಷಿಂಗ್ ಮೆಶೀನ್ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದ ಶ್ರೇಯೋಭಿವ್ರದ್ದಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ನುಡಿದು ರೋಟರಿ ಸಂಸ್ಥೆಯ ಜನಪರ ಸೇವೆಯು ಜನಾರ್ಧನ ಸೇವೆಗೆ ಸಮಾನವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆಯ ಸ್ಥಾಪನಾ ಅದ್ಯಕ್ಷ ಡಾ.ರಂಜನ್ ರಾವ್, ಈ ಯೋಜನೆಯು ನಮ್ಮ ಸಂಸ್ಥೆಯ ಸಮುದಾಯ ಸೇವೆಯ ಅಂಗವಾಗಿದೆ ಎಂದು ಮಾಹಿತಿ ನೀಡಿ ಅನಾಥಾಶ್ರಮದ ಪ್ರಾಮಾಣಿಕ ಸೇವಾ ಕಾರ್ಯವಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷೆ ರೋ.ಸಜ್ಜಾ ಭಾಸ್ಕರ್ ಸ್ವಾಗತಿಸಿದರು. ಸಂಸ್ಥೆಯ ವಲಯ ಪ್ರತಿನಿಧಿ ರೋ.ಪ್ರಶಾಂತ್ ರೈ, ರೋ.ಮಂಗಳ ರೈ ಮತ್ತು ಸಂಸ್ಥೆಯ ಸಲಹೆಗಾರ ಹಾಗೂ ಉದ್ಯಮಿ ಪ್ರದೀಪ್ ಮಿಸ್ಕಿತ್ ಉಪಸ್ಥಿತರಿದ್ದರು.
ಅನಾಥಾಶ್ರಮದ ಅದ್ಯಕ್ಷರಾದ ಲಲಿತ ಅವರು ರೋಟರಿ ಸಂಸ್ಥೆಯ ಉದಾರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ ನಮ್ಮ ಆಶ್ರಮದಲ್ಲಿ 45 ಅನಾಥ ಪುರುಷರು ಮತ್ತು ಮಹಿಳೆಯರು ನಿವಾಸಿಯಾಗಿದ್ದು ಎಂದು ಮಾಹಿತಿ ನೀಡಿ ಬಳಿಕ ವಂದಿಸಿದರು.
Post a Comment