Top News

ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್‌ಗೆ ರೋಟರಿ ‘ವಂದನಾ ಪ್ರಶಸ್ತಿ’ ಪ್ರದಾನ

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ರಾಜ್ಯ ಮಟ್ಟದ 23ನೇ ವಾರ್ಷಿಕ “ವಂದನಾ ಪ್ರಶಸ್ತಿ–2026” ಅನ್ನು ಖ್ಯಾತ ಪರಿಸರ ತಜ್ಞ ಹಾಗೂ ಹಸಿರು ಕ್ರಾಂತಿಕಾರರಾದ ಕಾಸರಗೋಡು ಮೂಲದ ಡಾ. ಆರ್.ಕೆ. ನಾಯರ್ ಅವರಿಗೆ ಪ್ರದಾನ ಮಾಡಲಾಯಿತು.

ನಗರದ ಹೊಟೇಲ್ ಸೀ ವ್ಯೂವ್ ಸಭಾಂಗಣದಲ್ಲಿ ಮಾರ್ಚ್ 21ರಂದು ನಡೆದ ಸಮಾರಂಭದಲ್ಲಿ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಡಾ. ನಾಯರ್ ಅವರು, ತಮ್ಮ ಸಾಧನೆಗೆ ಸರ್ಕಾರದ ಪ್ರೋತ್ಸಾಹ ಮತ್ತು ವೈಯಕ್ತಿಕ ಶ್ರಮ ಕಾರಣವಾಗಿದ್ದು, ಈ ಪ್ರಶಸ್ತಿ ಮುಂದಿನ ಸಾಧನೆಗೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಿದರು. ರೋಟರಿ ಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ರೋಟರಿ ಸಂಸ್ಥೆಯ ಸೇವೆ ಶ್ಲಾಘನೀಯ ಹಾಗೂ ಅನುಕರಣೀಯ ಎಂದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ದೇವದಾಸ್ ರೈ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿವರ್ಷ “ವಂದನಾ ಪ್ರಶಸ್ತಿ” ನೀಡಲಾಗುತ್ತದೆ ಎಂದು ತಿಳಿಸಿದರು. ಈ ವರ್ಷದ ಪ್ರಶಸ್ತಿ ವಿಜೇತರಾದ ಡಾ. ರಾಧಾಕೃಷ್ಣ ನಾಯರ್ ಅವರು ದೇಶದ 13 ರಾಜ್ಯಗಳಲ್ಲಿ ಸಾವಿರಾರು ಎಕರೆ ಬಂಜರು ಭೂಮಿಯನ್ನು ಮಿಯಾವಾಕಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ 130 ಅರಣ್ಯ ಪ್ರದೇಶಗಳನ್ನು ನಿರ್ಮಿಸಿರುವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.

ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಅಕ್ಷಯ್ ರೈ ಅವರು ಪ್ರಶಸ್ತಿ ವಿಜೇತರ ಪರಿಚಯ ನೀಡಿದರು. ಸಹಾಯಕ ಗವರ್ನರ್ ಡಾ. ಚಿನ್ನಗಿರಿ ಗೌಡ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರು ಮೂಲದ ಜಿಲ್ಲಾ ಪ್ರತಿನಿಧಿ ಪ್ರಜ್ವಲ್ ಆರ್. ಅವರು ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾಪತ್ರಿಕೆ “ಸೆಂಟೊರ್” ಅನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮಕ್ಕೆ ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವೇಕ್ ಕೋಟ್ಯಾನ್ ವರದಿ ಮಂಡಿಸಿದರು. 
ಮಾಜಿ ಅಧ್ಯಕ್ಷ ಬ್ರಾಯನ್ ಪಿಂಟೋ ಹಾಗೂ ವಲಯ ಪ್ರತಿನಿಧಿ ರವಿ ಜಲಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಚುನಾಯಿತ ಅಧ್ಯಕ್ಷ ರವೀಂದ್ರ ಸೇರಿದಂತೆ ಡಾ. ಶಿವಪ್ರಕಾಶ್ ಮತ್ತು ಜನಾರ್ದನ ಆಳ್ವ ಕಾರ್ಯಕ್ರಮವನ್ನು ಪ್ರಾಯೋಜಿಸಿದರು. ಡಾ. ಶೆಲ್ಡನ್ ಕ್ರಾಸ್ತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಾಕ್ಟ್ ಕಾರ್ಯದರ್ಶಿ ವಿವೇಕ್ ರಾವ್ ವಂದಿಸಿದರು.

Post a Comment

Previous Post Next Post