ಕೊಂಪದವು ಸಮೀಪ ಮುರ ಮಣ್ಣಿನಲ್ಲಿ ಬಾಕ್ಸೈಟ್ ಅಂಶ ಪತ್ತೆ ?; ಪರಿಶೀಲನೆಗೆ ಕೇಂದ್ರದ ತಜ್ಞರ ತಂಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಕಂಡುಬರುವ ಮುರ ಮಣ್ಣಿನಲ್ಲಿ ಬಾಕ್ಸೈಟ್ ಅಂಶ ಇರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಭೂವೈಜ್ಞಾನಿಕ ಸಮೀಕ್ಷೆ (GSI) ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಿ ಸಮಗ್ರ ಪರಿಶೀಲನೆ ನಡೆಸಲಿದೆ. ಈ ಬೆಳವಣಿಗೆಯಿಂದ ಅನ್ಯ ರಾಜ್ಯಗಳ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿರುವ ಮುರ ಮಣ್ಣಿನ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ದೊರೆಯುವ ಮುರ ಮಣ್ಣಿನ ಕೆಂಪು ಕಲ್ಲುಗಳನ್ನು ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸಿಮೆಂಟ್ ಉದ್ಯಮಗಳಿಗೆ ಮುರ ಮಣ್ಣಿನ ಸಾಗಾಟ ಹೆಚ್ಚಾಗಿದೆ. ಪ್ರತಿನಿತ್ಯ ನೂರಾರು ಲೋಡ್ ಮಣ್ಣು ಸಾಗಾಟವಾಗುತ್ತಿರುವ ಬಗ್ಗೆ ಸ್ಥಳೀಯವಾಗಿ ಆಕ್ಷೇಪಗಳು ವ್ಯಕ್ತವಾಗಿವೆ.

ಸಾಮಾನ್ಯವಾಗಿ ಮುರ ಮಣ್ಣಿನಲ್ಲಿ 10ರಿಂದ 20 ಗ್ರೇಡ್‌ವರೆಗೆ ಇದ್ದರೆ ಕೆಂಪು ಕಲ್ಲು, 20ರಿಂದ 30 ಗ್ರೇಡ್‌ವರೆಗೆ ಇದ್ದರೆ ಲ್ಯಾಟರೈಟ್ ಮಣ್ಣು ಹಾಗೂ 30ಕ್ಕಿಂತ ಹೆಚ್ಚಿನ ಗ್ರೇಡ್‌ ಇದ್ದರೆ ಬಾಕ್ಸೈಟ್ ಎಂದು ಪರಿಗಣಿಸಲಾಗುತ್ತದೆ. ಕೊಂಪದವು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 30ಕ್ಕಿಂತ ಹೆಚ್ಚಿನ ಗ್ರೇಡ್‌ನ ಅಂಶ ಇರುವ ಸಾಧ್ಯತೆ ಕುರಿತು ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಅನ್ವೇಷಣಾ ತಂಡವು ಸುಮಾರು 6–7 ತಿಂಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಕೊಂಪದವು ಹಾಗೂ ಮುಚೂರು ಗ್ರಾಮಗಳ ವಿವಿಧ ಪ್ರದೇಶಗಳಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣೆ ನಡೆಸಲಿದೆ. ಸುಮಾರು 1.2 ಚದರ ಕಿ.ಮೀ. ಪ್ರದೇಶದ ನಕ್ಷೆ ತಯಾರಿ, 220 ಮೀಟರ್‌ವರೆಗೆ ಭೂಗರ್ಭ ಕೊರೆಯುವಿಕೆ ಹಾಗೂ ಗುಂಡಿ ಮತ್ತು ಟ್ರೆಂಚಿಂಗ್ ಕಾರ್ಯ ನಡೆಸುವ ಯೋಜನೆಯೂ ಇದೆ.

ಬಾಕ್ಸೈಟ್ ಅಂಶ ಇರುವುದು ಪರಿಶೀಲನೆಯ ಬಳಿಕ ದೃಢಪಟ್ಟರೆ, ಮುರ ಮಣ್ಣಿನ ಗಣಿಗಾರಿಕೆ ಹಾಗೂ ಸಾಗಾಟದ ಮೇಲೆ ಕೇಂದ್ರ ಸರ್ಕಾರದ ಮುಂದಿನ ನಿರ್ದೇಶನಗಳು ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.

Post a Comment

Previous Post Next Post