ಅ.5ರಂದು ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ದೈವ ಪರಿಚಾರಕರ ಕಲ್ಯಾಣಕ್ಕೆ ‘ಕೊಡಿಯಾಡಿತ ನಿರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮ

 

ಮಂಗಳೂರು: ದೈವ ಪರಿಚಾರಕರ ಕಲ್ಯಾಣ ಹಾಗೂ ದೈವಾರಾಧನೆಯ ಪರಂಪರೆಯ ಸಂರಕ್ಷಣೆಯ ಉದ್ದೇಶದಿಂದ ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ‘ಕೊಡಿಯಾಡಿತ ನಿರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮವನ್ನು ಅ.5ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ದೈವ ಪರಿಚಾರಕರಿಗೆ ವಿಮಾ ಸೌಲಭ್ಯ, ಡಿಜಿಟಲ್ ಗುರುತಿನ ಚೀಟಿ ವಿತರಣೆ, ಸಾಮಾಜಿಕ ಜಾಲತಾಣ ಲೋಕಾರ್ಪಣೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೈವಸೇವೆಯಲ್ಲಿ ತೊಡಗಿರುವ ಪರಿಚಾರಕರಿಗೆ ಅಪಘಾತ, ಅನಾರೋಗ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ನೆರವಾಗುವ ಉದ್ದೇಶದಿಂದ ವಿಮೆ, ಮಕ್ಕಳ ಶಿಕ್ಷಣ, ವೈದ್ಯಕೀಯ ನೆರವು ಹಾಗೂ ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ಸೇರಿದಂತೆ ಹಲವು ಯೋಜನೆಗಳನ್ನು ಟ್ರಸ್ಟ್ ಕೈಗೊಂಡಿದೆ. ಕಳೆದ ಬಾರಿ 400ರಿಂದ 450 ಮಂದಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ಈ ಬಾರಿ 500ಕ್ಕೂ ಹೆಚ್ಚು ದೈವ ಪರಿಚಾರಕರಿಗೆ ವಿಮೆ ಮಾಡಿಸಲಾಗುತ್ತಿದೆ ಎಂದರು.

ಹೃದಯಾಘಾತದಿಂದ ಮೃತಪಟ್ಟ ಸುದೇಶ್ ಪೂಜಾರಿ ಕಾವೂರು ಶಾಂತಿನಗರ ಅವರ ಕುಟುಂಬಕ್ಕೆ ಕಳೆದ ಬಾರಿ ₹1.07 ಲಕ್ಷ ನೆರವು ನೀಡಲಾಗಿದೆ. ಸದಸ್ಯರ ಮರಣದ ಸಂದರ್ಭದಲ್ಲಿ ವಿಮಾ ಸೌಲಭ್ಯದ ಜತೆಗೆ ಟ್ರಸ್ಟ್ ವತಿಯಿಂದ ₹50 ಸಾವಿರದವರೆಗೆ ಸಾಂತ್ವನ ನೆರವು ನೀಡುವ ಯೋಜನೆಯೂ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗ್ಗೆ 11.30ಕ್ಕೆ ‘ಚಾ ಪರ್ಕ’ ತಂಡದಿಂದ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಅ.8ರಂದು ಕಾವೂರು ಸೊಸೈಟಿ ಹಾಲ್‌ನಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಮಾ ಯೋಜನೆ ಹಾಗೂ ಎ.ಜೆ. ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಕೆಂಜಾರು, ದಿನೇಶ್ ಕಕ್ಕೆಪದವು, ಜಿತೇಶ್ ಮಡ್ಯಾರ್, ಉದಯ ಪೂಜಾರಿ, ಹರ್ಷ ಕುಮಾರ್, ಸುದರ್ಶನ್ ಸನಿಲ್ ಅಬ್ಬೆಟ್ಟು ಹಾಗೂ ಹೊನ್ನಯ್ಯ ಪೂಜಾರಿ ಪೆರಾರ ಬಜಪೆ ಉಪಸ್ಥಿತರಿದ್ದರು.

Post a Comment

Previous Post Next Post