ರೋಟರಿ ಮಂಗಳೂರು ಸಿಟಿ ವತಿಯಿಂದ ರಾಷ್ಟ್ರೀಯ ಇಂಜಿನಿಯರ್ಸ್ ದಿನಾಚರಣೆ

ಮಂಗಳೂರು: ದೇಶದ ಸರ್ವತೋಮುಖ ಪ್ರಗತಿ ಹಾಗೂ ತಾಂತ್ರಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಇಂಜಿನಿಯರ್‌ಗಳ ಸಾಧನೆಯನ್ನು ಸ್ಮರಿಸುವ ದಿನವೇ ರಾಷ್ಟ್ರೀಯ ಇಂಜಿನಿಯರ್ಸ್ ದಿನಾಚರಣೆ ಎಂದು ಖ್ಯಾತ ಸಿವಿಲ್ ಇಂಜಿನಿಯರ್ ಹಾಗೂ ರೋಟರಿ ಜಿಲ್ಲೆ 3181ರ ದಂಡಾಧಿಕಾರಿ ಏಕನಾಥ್ ದಂಡಕೇರಿ ಹೇಳಿದರು.

ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಸೆ. 24ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂಜಿನಿಯರ್‌ಗಳ ಕೊಡುಗೆ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ರೋಟರಿ ವಲಯ 2ರ ಸಹಾಯಕ ಗವರ್ನರ್, ಇಂಜಿನಿಯರ್ ಸಂದೀಪ್ ರಾವ್ ಇಡ್ಯ ಅವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಸ್ಮರಿಸಿದರು. ವಿಶ್ವೇಶ್ವರಯ್ಯ ಅವರು ಮೇಧಾವಿ ಹಾಗೂ ಖ್ಯಾತ ಇಂಜಿನಿಯರ್ ಆಗಿ ಸಲ್ಲಿಸಿದ ಸೇವೆ, ವೃತ್ತಿ ಕೌಶಲ್ಯ, ಅಸಾಧಾರಣ ಪ್ರತಿಭೆ, ಶ್ರೇಷ್ಠ ಸಾಧನೆ ಮತ್ತು ದೇಶಪ್ರೇಮ ಇಂದಿನ ಇಂಜಿನಿಯರ್‌ಗಳಿಗೆ ಮಾದರಿಯಾಗಿದೆ ಎಂದರು.

ತಮ್ಮ ವಿಶಿಷ್ಟ ಕಾರ್ಯಕ್ಷಮತೆ ಹಾಗೂ ದೂರದೃಷ್ಟಿಯ ಯೋಜನೆಗಳ ಮೂಲಕ ಇಂಜಿನಿಯರಿಂಗ್ ಕ್ಷೇತ್ರದ ಶಕ್ತಿ, ಸಾಮರ್ಥ್ಯ ಮತ್ತು ಕೌಶಲ್ಯವನ್ನು ವಿಶ್ವದ ಗಮನಕ್ಕೆ ತಂದ ವಿಶ್ವೇಶ್ವರಯ್ಯ ಅವರ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ, ಆಡಳಿತ ದಕ್ಷತೆ ಹಾಗೂ ಪ್ರಾಮಾಣಿಕತೆ ಯುವ ಇಂಜಿನಿಯರ್‌ಗಳಿಗೆ ದಾರಿದೀಪವಾಗಿವೆ ಎಂದು ಹೇಳಿದರು. ‘ಶ್ರಮಿಸು ಇಲ್ಲವೇ ನಶಿಸು’ ಎಂಬ ಧ್ಯೇಯವಾಕ್ಯವನ್ನು ಅವರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.

ಇದೇ ಸಂದರ್ಭದಲ್ಲಿ ಎನ್‌ಐಟಿಕೆ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕಟ್ಟಾ ವೆಂಕಟರಮಣ ಅವರು ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಹಾಗೂ ಅನುಪಮ ಸೇವೆಯನ್ನು ಪರಿಗಣಿಸಿ ರೋಟರಿ ಸಂಸ್ಥೆಯ ‘ಆದರ್ಶ ಇಂಜಿನಿಯರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಕಟ್ಟಾ ವೆಂಕಟರಮಣ ಅವರು ಸಾಧಕರನ್ನು ಗುರುತಿಸಿ ಗೌರವಿಸುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಮಾಜಿ ಅಧ್ಯಕ್ಷ ಸುಮಿತ್ ರಾವ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಹಾಗೂ ಅವರ ಸಾಧನೆಗಳನ್ನು ವಿವರಿಸಿ ಅಭಿನಂದನಾ ಭಾಷಣ ಮಾಡಿದರು.

ಸಂಸ್ಥೆಯ ಅಧ್ಯಕ್ಷೆ ಸಜ್ಜಾ ಭಾಸ್ಕರ್ ಸ್ವಾಗತಿಸಿ ದಿನಾಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಬಳಿಕ ಇಂಜಿನಿಯರ್ ಸದಸ್ಯರನ್ನು ಗೌರವಿಸಲಾಯಿತು. ಕಾರ್ಯದರ್ಶಿ ನಿತಿನ್ ದೇವಾಡಿಗ ವರದಿ ಮಂಡಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಹಾಗೂ ಮಾಜಿ ಅಧ್ಯಕ್ಷ ಬಸವ ಕುಮಾರ್ ಉಪಸ್ಥಿತರಿದ್ದರು.

Post a Comment

Previous Post Next Post