ಎಮ್ಮೆಕೆರೆ ಕಟ್ಟಡದ ಸ್ಲಾಬ್ ಕುಸಿತ: ಗಂಭೀರ ಗಾಯಗೊಂಡಿದ್ದ ಪಿಯು ವಿದ್ಯಾರ್ಥಿ ಮೃತ ; ಕಟ್ಟಡ ಮಾಲೀಕ, ಸಂಘದ ಸ್ಥಾಪಕ ವಕೀಲರ ವಿರುದ್ಧ ಎಫ್‌ಐಆರ್

ಮಂಗಳೂರು : ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದ ವೇಳೆ ಕಟ್ಟಡದ ವೆರಾಂಡಾದ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಯು ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಹಳೆಯಂಗಡಿ ನಿವಾಸಿ, ಸದ್ಯ ಪಾಂಡೇಶ್ವರದ ಫ್ಲ್ಯಾಟ್‌ನಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದ ಮೊಯ್ದಿನ್ ಶಮ್ಮಾಸ್ (16) ಎಂದು ಗುರುತಿಸಲಾಗಿದೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಅವರು, ಸೆ.26ರಂದು ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಪಾಂಡೇಶ್ವರದ ಎಮ್ಮೆಕೆರೆಯ ರಮಾ ಲಕ್ಷ್ಮೀನಾರಾಯಣ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಆಗಮಿಸುತ್ತಿದ್ದ ವೇಳೆ ಕೆಲವರು ಕಟ್ಟಡದ ಮೊದಲ ಮಹಡಿಯ ವೆರಾಂಡಾದಲ್ಲಿ ನಿಂತು ರ್ಯಾಲಿಯನ್ನು ವೀಕ್ಷಿಸುತ್ತಿದ್ದರು.

ಈ ವೇಳೆ ವೆರಾಂಡಾದ ಬದಿಯ ತಡೆಗೋಡೆಗೆ ಹೆಚ್ಚಿನ ಭಾರ ಬಿದ್ದ ಪರಿಣಾಮ ಅದು ಕುಸಿದು, ಅದರೊಂದಿಗೆ ಕಾಂಕ್ರೀಟ್ ಸ್ಲಾಬ್ ಕೂಡ ಕೆಳಗೆ ಬಿದ್ದಿದೆ. ಇದೇ ವೇಳೆ ಕಟ್ಟಡದ ಕೆಳಭಾಗದಲ್ಲಿ ನಿಂತು ರ್ಯಾಲಿ ವೀಕ್ಷಿಸುತ್ತಿದ್ದ ಶಮ್ಮಾಸ್ ಅವರ ತಲೆಯ ಮೇಲೆ ಸ್ಲಾಬ್ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಅಲ್ಲದೆ ಭುಜ ಮತ್ತು ಬೆನ್ನಿಗೂ ತೀವ್ರ ಗಾಯಗಳಾಗಿದ್ದವು.

ಸ್ಥಳೀಯರು ತಕ್ಷಣ ಅವರನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.26ರ ರಾತ್ರಿ ಸುಮಾರು 11.30ರ ವೇಳೆಗೆ ವೈದ್ಯರು ಶಮ್ಮಾಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸ್ಲಾಬ್ ಕುಸಿತದಿಂದ ನಾಲ್ವರು ವಿದ್ಯಾರ್ಥಿಗಳಿಗೂ ಗಂಭೀರ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಟ್ಟಡ ಮಾಲೀಕ, ಸಂಘದ ಸ್ಥಾಪಕರ ವಿರುದ್ಧ ಎಫ್‌ಐಆರ್ :
ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಸ್ಥಾಪಕ, ವಕೀಲ ದಿನಕರ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಟ್ಟಡ ಹಳೆಯದಾಗಿದ್ದರೂ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸದಿರುವುದು ಘಟನೆಗೆ ಕಾರಣವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 106(1), 125(ಎ), 125(ಬಿ) ಹಾಗೂ 290ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

Previous Post Next Post