ಮಂಗಳೂರಿನಲ್ಲಿ ಅ. 4ರಂದು ‘ನಾದ ನಂದನಂ’ ಭಜನಾ ಸಂಕೀರ್ತನೋತ್ಸವ ; ಭಕ್ತಿ, ಭಾವ, ಜಾನಪದ ಹಾಗೂ ಚಿತ್ರಗೀತೆಗಳ ಸಂಗಮ; 19 ಕಲಾವಿದರಿಂದ ಸಂಗೀತ ಪ್ರಸ್ತುತಿ


ಮಂಗಳೂರು: ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ನೋಂದಾಯಿತವಾಗಿರುವ ‘ನಾದ ನಂದನಂ’ (ರಿ.) ಸಂಸ್ಥೆಯ ಪ್ರಥಮ ಭಜನಾ-ಸಂಕೀರ್ತನೋತ್ಸವ ಹಾಗೂ ಉದ್ಘಾಟನಾ ಸಮಾರಂಭ ಅ.4ರಂದು ಸಂಜೆ 5 ಗಂಟೆಗೆ ಉರ್ವಾ ಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಕುರಿತು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮಾಹಿತಿ ನೀಡಿದರು.

‘ನಾದ ನಂದನಂ’ ಸಂಸ್ಥೆಯ ಮೊದಲ ಕಾರ್ಯಕ್ರಮದಲ್ಲಿ ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ಚಲನಚಿತ್ರ ಗೀತೆಗಳೊಂದಿಗೆ ಪುರಂದರದಾಸ, ಕನಕದಾಸ, ಬಸವಣ್ಣ ಮತ್ತು ಶರಣರ ತತ್ವಪದಗಳನ್ನು ವಿವಿಧ ಸಂಗೀತ ಪ್ರಕಾರಗಳಲ್ಲಿ ಪ್ರಸ್ತುತಪಡಿಸಲಾಗುವುದು. ಭಕ್ತಿ, ಭಾವ, ಜಾನಪದ ಹಾಗೂ ಚಿತ್ರಗೀತೆಗಳ ಸಂಗಮದೊಂದಿಗೆ ಬಹುಭಾಷಾ ಹಾಡುಗಳ ಪ್ರಸ್ತುತಿ ಕಾರ್ಯಕ್ರಮದ ವಿಶೇಷತೆಯಾಗಲಿದೆ.

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಶಂಕರ ಶ್ಯಾನುಭೋಗ್ ಹಾಗೂ ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಬೆಂಗಳೂರು ಮೂಲದ ರಮೇಶ್ ಚಂದ್ರ ಅವರ ನೇತೃತ್ವದಲ್ಲಿ 19 ಕಲಾವಿದರ ತಂಡ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ. ಪಕ್ವ ಹಾಡುಗಾರರು, ನುರಿತ ಸಂಗೀತಗಾರರು, ಎಲ್‌ಇಡಿ ಪರದೆ, ವಿಶೇಷ ಧ್ವನಿ ಹಾಗೂ ಬೆಳಕಿನ ರಂಗ ವಿನ್ಯಾಸದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಖ್ಯಾತ ಗಾಯಕ ಶಂಕರ ಶ್ಯಾನುಭೋಗ್ ಅವರು ನಂದಾದೀಪ ಬೆಳಗಿಸುವ ಮೂಲಕ ‘ನಾದ ನಂದನಂ’ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿಯೂ ಭಜನಾ-ಸಂಕೀರ್ತನೋತ್ಸವ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಸಂಘಟಕ ಎಸ್.ಎಲ್. ಭಾರದ್ವಾಜ್ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಉಡುಪಿಯ ಶ್ಯಾಮಿಲಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಜಿ. ಶಂಕರ್, ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಸರ್ವೋತ್ತಮ ಶೆಟ್ಟಿ ಸೇರಿದಂತೆ ಬ್ಯಾಂಕಿಂಗ್, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಉಚಿತ ಪಾಸ್ ಲಭ್ಯ:
ಕಾರ್ಯಕ್ರಮದ ಉಚಿತ ಪಾಸ್‌ಗಳು ಮಂಗಳೂರಿನ ಓಷನ್ ಪರ್ಲ್ (ನವಭಾರತ್ ಸರ್ಕಲ್), ತಾಜ್ ಮಹಲ್, ಪತ್ತುಮುಡಿ (ಲಾಲ್‌ಬಾಗ್), ಅಯೋಧ್ಯಾ (ಕೊಡಿಯಾಲ್‌ಬೈಲ್) ಹಾಗೂ ಪದ್ಮಶ್ರೀ (ಪಂಪ್‌ವೆಲ್) ಹೋಟೆಲ್‌ಗಳ ಕೌಂಟರ್‌ಗಳಲ್ಲಿ ಲಭ್ಯವಿರುತ್ತವೆ. ಪಾಸ್ ಪಡೆಯಲು ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕಾಗಿದೆ.

ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ನಾದ ನಂದನಂ’ ಸಂಸ್ಥೆಯ ಈ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವಂತೆ ಎಸ್.ಎಲ್. ಭಾರದ್ವಾಜ್ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಮುಲ್ಕಿ ರವೀಂದ್ರ ಪ್ರಭು, ರಮೇಶ್ ಚಂದ್ರ, ಜಗನ್ನಾಥ್ ಶಿರ್ಲಾಲು ಹಾಗೂ ಎಸ್.ಎಲ್. ಭಾರದ್ವಾಜ್ ಉಪಸ್ಥಿತರಿದ್ದರು.

Post a Comment

Previous Post Next Post