ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಹೊರಟ್ಟಿ ಅವರನ್ನೇ ಹಂಗಾಮಿ ಸಭಾಪತಿಯಾಗಿ ಮುಂದುವರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೊರಟ್ಟಿ ಅವರು ರಾಜೀನಾಮೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರಾಗಿರುವ ಅವರ ಹೃದಯ ವೈಶಾಲ್ಯತೆ ಮೆಚ್ಚುವಂತದ್ದು” ಎಂದರು.
ಆಗಸ್ಟ್ 13ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 14ರಂದು ನೂತನ ಉಪಸಭಾಪತಿ ಆಯ್ಕೆ ನಡೆಯಲಿದೆ. ಬಳಿಕ ಉಪಸಭಾಪತಿ ಮೂಲಕ ಸಭಾಪತಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಶಿವಕುಮಾರ್ ಹೇಳಿದರು.
ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ನಾವು ಒಪ್ಪಂದಕ್ಕೆ ಬಂದ ಮೇಲೆ ಅವಿಶ್ವಾಸ ನಿರ್ಣಯದ ಪ್ರಶ್ನೆಯೇ ಇಲ್ಲ. ಈಗ ಹೊರಟ್ಟಿ ಅವರೇ ರಾಜೀನಾಮೆ ನೀಡಿದ್ದಾರೆ. ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಕಿದೆ” ಎಂದರು.
“ಹೊರಟ್ಟಿ ಅವರು ಶಿಸ್ತಿನ ಮನುಷ್ಯ. ಸಭಾಪತಿ ಸ್ಥಾನಕ್ಕೆ ಅವರು ನೀಡಿದಷ್ಟು ಗೌರವವನ್ನು ಯಾರೂ ನೀಡಿಲ್ಲ. ಎಲ್ಲ ಸಂದರ್ಭದಲ್ಲೂ ಸರ್ಕಾರದ ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವರ ಬಗ್ಗೆ ಹೆಮ್ಮೆಯಿದೆ” ಎಂದು ಸಿಎಂ ಹೇಳಿದರು.
ಸಂಪುಟ ಪುನಾರಚನೆ ಕುರಿತು ಕೇಳಿದ ಪ್ರಶ್ನೆಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, “ಮಾಧ್ಯಮಗಳಿಗೆ ಸರ್ಜರಿ ಮಾಡಬೇಕು ಎಂದುಕೊಂಡಿದ್ದೇವೆ” ಎಂದು ಚಟಾಕಿ ಹಾರಿಸಿದರು.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, ಇದು ರಾಜಕೀಯ ಅಜೆಂಡಾ ಎಂದು ಆರೋಪಿಸಿದರು. “ನಾನು ರೈತರ ಅಭಿಪ್ರಾಯ ಪಡೆಯಲು ಸಮಿತಿ ರಚಿಸಿದ್ದೇನೆ. ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡುವುದಿಲ್ಲ. ಕಾನೂನು ಪ್ರಕಾರ ಮುಂದುವರಿಯುತ್ತೇವೆ” ಎಂದರು.
ಮತದಾರರ ಪಟ್ಟಿಯಿಂದ 1.10 ಕೋಟಿ ಹೆಸರುಗಳನ್ನು ತೆಗೆಯಲಾಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಪ್ರತ್ಯೇಕವಾಗಿ ಮಾತನಾಡುವುದಾಗಿ ತಿಳಿಸಿದರು.
Post a Comment