ಬೆಂಗಳೂರು: ರಾಜ್ಯದ ವಿವಿಧ ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಹೊಸ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.
ಇತ್ತೀಚೆಗೆ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾಳಗದ ನಡುವೆ ಸಿಲುಕಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ನಿಯಮಗಳು ಇಲ್ಲಿವೆ:
ಸುರಕ್ಷಿತ ಅಂತರ ಕಡ್ಡಾಯ: ಇನ್ಮುಂದೆ ಪ್ರವಾಸಿಗರು ಆನೆಗಳ ಬಳಿ ಹೋಗುವಂತಿಲ್ಲ. ಆನೆಗಳು ಸ್ನಾನ ಮಾಡುವಾಗ ಅಥವಾ ಇತರ ಚಟುವಟಿಕೆಗಳಲ್ಲಿ ತೊಡಗಿರುವಾಗ ಕನಿಷ್ಠ 100 ಅಡಿ ದೂರದಲ್ಲಿ ನಿಂತು ವೀಕ್ಷಿಸಬೇಕು.
ಸಲ್ಫಿ ಮತ್ತು ಫೋಟೋ ನಿಷೇಧ: ಆನೆಗಳ ಅತ್ಯಂತ ಹತ್ತಿರಕ್ಕೆ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ಫೋಟೋ ತೆಗೆಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸ್ಪರ್ಶಕ್ಕೆ ಅವಕಾಶವಿಲ್ಲ: ಆನೆಗಳ ಮೈ ತೊಳೆಯುವುದು ಅಥವಾ ಅವುಗಳನ್ನು ಮುಟ್ಟುವುದಕ್ಕೆ ಅವಕಾಶವಿರುವುದಿಲ್ಲ.
ಆಹಾರ ನೀಡುವಂತಿಲ್ಲ: ಪ್ರವಾಸಿಗರು ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ತಿನ್ನಿಸುವುದನ್ನು ನಿರ್ಬಂಧಿಸಲಾಗಿದೆ.
ಸಚಿವರ ಪ್ರತಿಕ್ರಿಯೆ:
"ಆನೆಗಳು ಎಷ್ಟೇ ಪಳಗಿದ್ದರೂ ಸಹಜವಾಗಿಯೇ ಅವುಗಳ ವರ್ತನೆ ಅನಿರೀಕ್ಷಿತವಾಗಿರುತ್ತದೆ. ಪ್ರವಾಸಿಗರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆ. ಆದ್ದರಿಂದ ಈ ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ," ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆಯು ಶೀಘ್ರದಲ್ಲೇ ಅಧಿಕೃತ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಬಿಡುಗಡೆ ಮಾಡಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
Tags
ರಾಜ್ಯ