ಮಂಗಳೂರು: ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಿಲ್ಲವ ಬ್ರಿಗೇಡ್ (ರಿ.) ಮತ್ತು ನಂದಾದೀಪ ಫೌಂಡೇಶನ್ ವತಿಯಿಂದ ನಿರ್ಮಿಸಲಾದ 14ನೇ ಮತ್ತು 15ನೇ ಮನೆಗಳ ಹಸ್ತಾಂತರ ಹಾಗೂ 'ಸೇವಾ ಸಂಭ್ರಮ' ಕಾರ್ಯಕ್ರಮವು ಏಪ್ರಿಲ್ 25ರಂದು ಸಂಜೆ 6.00 ಗಂಟೆಗೆ ನಗರದ ಬೋಳಾರ ಪಂಬದಬೆಟ್ಟು ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ನಂದಾದೀಪ ಫೌಂಡೇಶನ್‌ನ ಸ್ಥಾಪಕ ಸದಾನಂದ ಪೂಜಾರಿ ಹೇಳಿದರು.
ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಮೆರುಗು: 'ಮ್ಯೂಸಿಕಲ್ ಸ್ಟಾರ್ ನೈಟ್'
ಸಂಜೆ 8 ಗಂಟೆಯಿಂದ ಖ್ಯಾತ ಕಲಾವಿದರನ್ನೊಳಗೊಂಡ 'ಮ್ಯೂಸಿಕಲ್ ಸ್ಟಾರ್ ನೈಟ್' ಕಾರ್ಯಕ್ರಮ ಜರುಗಲಿದ್ದು, ಪ್ರಕಾಶ್ ಮಹದೇವನ್, ರೂಪಾ ಪ್ರಕಾಶ್, ಶಮೀರ್ ಮುಡಿಪು, ಸುಪ್ರಿಯಾ ರಾಮ್, ಮೈಮ್ ರಾಮದಾಸ್, ಅನೀಶ್ ವೇಣೂರು ಸೇರಿದಂತೆ ಹಲವು ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದರು.
ಬಿಲ್ಲವ ಬ್ರಿಗೇಡ್‌ನ ಸಾಮಾಜಿಕ ಕ್ರಾಂತಿ :
ಬಿಲ್ಲವ ಬ್ರಿಗೇಡ್ ಈವರೆಗೆ ಆಸರೆ ಇಲ್ಲದವರಿಗೆ 13 ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಈಗ 14 ಮತ್ತು 15ನೇ ಮನೆಗಳು ಸಜ್ಜುಗೊಂಡಿವೆ. ಕೇವಲ ಮನೆ ನಿರ್ಮಾಣ ಮಾತ್ರವಲ್ಲದೆ, ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾ, ಲಂಡನ್, ಆಸ್ಟ್ರೇಲಿಯಾದಂತಹ ದೇಶಗಳಿಗೆ ಕಳುಹಿಸುವಲ್ಲಿಯೂ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.
ಕೋವಿಡ್ ಸಮಯದ ಸೇವೆ: 4,500ಕ್ಕೂ ಅಧಿಕ ಕಿಟ್ ವಿತರಣೆ ಮತ್ತು 800 ಯೂನಿಟ್ ರಕ್ತದಾನ ಮಾಡಲಾಗಿದೆ.
ಪ್ರಶಸ್ತಿ ಗೌರವ: 2025ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಸಂಘಟನೆ ಪಡೆದುಕೊಂಡಿದೆ.
ಸದಾನಂದ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಈ ಸಂಸ್ಥೆಯು, ನಾರಾಯಣ ಗುರುಗಳ ಸಂದೇಶದಂತೆ ಪ್ರಚಾರ ಬಯಸದೆ ಸದ್ದಿಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಬ್ರಿಗೇಡ್ ಸ್ಥಾಪಕ ಸದಸ್ಯರಾದ ಅನ್ವಿತ್ ಕಟೀಲ್, ಪ್ರಶಾಂತ್ ಮಂಗಳಾದೇವಿ, ಕಾರ್ಯಾಧ್ಯಕ್ಷ ನಿಶಾನ್ ಪೂಜಾರಿ, ಸಜಿಪ ಮೂಡ ಬಾಲಗಣಪತಿ ದೇವಸ್ಥಾನದ ಮೊತ್ತೇಸರ ಯಶವಂತ ದೇರಾಜೆ ಮತ್ತು ನಾರಾಯಣ ಗುರು ಯುವ ವೇದಿಕೆಯ ಸುಧಾಕರ ಕರ್ಕೇರ ಉಪಸ್ಥಿತರಿದ್ದರು.
Tags
ಮಂಗಳೂರು