ಮುಚ್ಚೂರು - ಕೊಂಪದವು ಭಾಗಕ್ಕೆ ಸರ್ಕಾರಿ ಬಸ್ ಸೇವೆಗೆ ಆಗ್ರಹ ; ಗ್ರಾಮ ಪಂಚಾಯತ್ ಮುಂಭಾಗ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮಂಗಳೂರು : ಮೂಲಭೂತ ಸಾರಿಗೆ ಸೌಲಭ್ಯಗಳಿಂದ ವಂಚಿತವಾಗಿರುವ ಮುಚ್ಚೂರು, ಕೊಂಪದವು, ನೀರುಡೆ ಹಾಗೂ ಬಂಗೇರಪದವು ಗ್ರಾಮಗಳಿಗೆ ಸರ್ಕಾರಿ ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ, ಮುಚ್ಚೂರು–ಕೊಂಪದವು ವತಿಯಿಂದ ಮುಚ್ಚೂರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಖಾಸಗಿ ಬಸ್ ಮಾಲೀಕರ ಲಾಬಿಗೆ ಸಾರಿಗೆ ಅಧಿಕಾರಿಗಳು ಮಣಿಯುತ್ತಿದ್ದಾರೆ ಎಂದು ಆರೋಪಿಸಿದರು. ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಗ್ರಾಮೀಣ ಭಾಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರು ಸತತವಾಗಿ ಮನವಿ ಸಲ್ಲಿಸುತ್ತಿದ್ದರೂ ಈ ಭಾಗಕ್ಕೆ ಸರ್ಕಾರಿ ಬಸ್ ಸೇವೆ ಕಲ್ಪಿಸಲು ನಿರಾಕರಿಸಲಾಗುತ್ತಿದೆ. ಕೂಡಲೇ ಸರ್ಕಾರಿ ಬಸ್ ಸಂಚಾರ ಆರಂಭಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಕಾರ್ಮಿಕ ನಾಯಕ ಸದಾಶಿವ ದಾಸ್ ಮಾತನಾಡಿ, ಮುಚ್ಚೂರು–ಕೊಂಪದವು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ ವರ್ಗದ ಜನರು ವಾಸಿಸುತ್ತಿದ್ದು, ಬಸ್‌ಗಳ ಕೊರತೆ ಹಾಗೂ ಖಾಸಗಿ ಬಸ್‌ಗಳ ಅನಿಯಮಿತ ಸಂಚಾರದಿಂದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಭವ್ಯ ಮುಚ್ಚೂರು ಮಾತನಾಡಿ, ಖಾಸಗಿ ಬಸ್‌ಗಳ ಮೂಲಕ ಮಂಗಳೂರು ತಲುಪಲು ಕನಿಷ್ಠ ಒಂದೂವರೆ ಗಂಟೆ ಬೇಕಾಗುತ್ತದೆ. ಬೆಳಗ್ಗಿನ ಸಮಯದಲ್ಲಿ ಬಸ್‌ಗಳಲ್ಲಿ ವಿಪರೀತ ಜನಸಂದಣಿ ಇರುವುದರಿಂದ ಪ್ರಯಾಣ ಕಷ್ಟಕರವಾಗಿದೆ. ಅಲ್ಲದೆ, ಏಕಾಏಕಿ ಟ್ರಿಪ್‌ಗಳನ್ನು ಕಡಿತಗೊಳಿಸುವುದರಿಂದ ಗ್ರಾಮಸ್ಥರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಸರ್ಕಾರಿ ಬಸ್‌ಗಳ ಕೊರತೆಯಿಂದ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಉಚಿತ ಪ್ರಯಾಣದ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಹೋರಾಟ ಸಮಿತಿಯ ಪ್ರಮುಖರಾದ ಹರೀಶ್ಚಂದ್ರ ಗೌಡ ಕೊಂಪದವು, ಬಾಬು ಗೌಡ, ರವೀಂದ್ರ ಶೆಟ್ಟಿಗಾರ್ ಮುಚ್ಚೂರು, ರಾಮಣ್ಣ ಶೆಟ್ಟಿಗಾರ್ ಕೊಂಪದವು, ವೇದಾವತಿ ಮುಚ್ಚೂರು, ಹೇಮಲತಾ, ಆನಂದ ದೇವಾಡಿಗ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹೋರಾಟ ಸಮಿತಿ ಸಂಚಾಲಕ ನೋಣಯ್ಯ ಗೌಡ ಸ್ವಾಗತಿಸಿದರು. ಪ್ರದೇಶ ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಆಗಮಿಸಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು.

Post a Comment

Previous Post Next Post