ಕಲಾ ಶಿಕ್ಷಕ ಝುಬೇರ್ ಖಾನ್ ಕುಡ್ಲ ಅವರಿಗೆ ‘ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’

ಮಂಗಳೂರು: ನಗರದ ಪ್ರೆಸಿಡೆನ್ಸಿ ಶಾಲೆಯ ಕಲಾ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಝುಬೇರ್ ಖಾನ್ ಕುಡ್ಲ ಅವರು 2026ನೇ ಸಾಲಿನ ಪ್ರತಿಷ್ಠಿತ 'ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಬಿ ನ್ಯೂಸ್ ಪತ್ರಿಕೆ ಹಾಗೂ ಸಿರಿಗನ್ನಡ ಫೌಂಡೇಶನ್ ಕರ್ನಾಟಕದ ಜಂಟಿ ಆಶ್ರಯದಲ್ಲಿ ನೀಡಲಾಗುವ ಈ ಪ್ರಶಸ್ತಿಗೆ ಝುಬೇರ್ ಖಾನ್ ಕುಡ್ಲ ಅವರ ಸುದೀರ್ಘ ಸಮಾಜಮುಖಿ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 6, 2026ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ವೇದಿಕೆಯಲ್ಲಿ ನಡೆಯಲಿರುವ ‘ಶಿಕ್ಷಕರ ಹಬ್ಬ’ ಕಾರ್ಯಕ್ರಮದಲ್ಲಿ ಜರುಗಲಿದೆ.

ಬಹುಮುಖ ಪ್ರತಿಭೆಯ ಕಲಾ ಶಿಕ್ಷಕರಾಗಿರುವ ಝುಬೇರ್ ಖಾನ್ ಕುಡ್ಲ ಅವರು ಕಲಾ ಶಿಕ್ಷಕರಾಗಿ ಹಾಗೂ ಚಿತ್ರಕಲಾವಿದರಾಗಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿವಿಧ ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಮೆಚ್ಚುಗೆ ಪತ್ರ ಪಡೆದಿರುವ ಝುಬೇರ್ ಖಾನ್ ಕುಡ್ಲ ಅವರು ರಾಜಾ ರವಿವರ್ಮ ಅಂತರರಾಷ್ಟ್ರೀಯ ಗೋಲ್ಡ್ ಮೆಡಲ್, ಎಂ.ಎಫ್. ಹುಸೇನ್ ಅಂತರರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ.

ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಝುಬೇರ್ ಖಾನ್ ಕುಡ್ಲ ಅವರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಮಂಗಳೂರಿನ ಶೈಕ್ಷಣಿಕ ಹಾಗೂ ಕಲಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

Post a Comment

Previous Post Next Post