ಮಂಗಳೂರು, ಜುಲೈ 20: ಪಾಠದ ಜೊತೆಗೆ ಕೃಷಿ ಹಾಗೂ ಗದ್ದೆ ನಾಟಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಕಾಲೇಜಿನ ವತಿಯಿಂದ ವಿಶಿಷ್ಟ ಕಾರ್ಯಕ್ರಮವನ್ನು ಕಟೀಲು ಸಮೀಪದ ಮಾರಡ್ಕದಲ್ಲಿರುವ ಕೃಷಿಕ ಜಯ ಪೂಜಾರಿ ಅವರ ಗದ್ದೆಯಲ್ಲಿ ಆಯೋಜಿಸಲಾಯಿತು. ಲೂಕಸ್ ಸಲ್ದಾನ ಹಾಗೂ ಸತೀಶ್ ಸಲ್ದಾನ ಅವರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗದ್ದೆ ನಾಟಿಯ ವಿವಿಧ ವಿಧಾನಗಳು, ಪಾಡ್ದನ ಹಾಡುಗಳು, ಗದ್ದೆಗಳಲ್ಲಿ ಆಚರಿಸುವ ಸಾಂಪ್ರದಾಯಿಕ ಆಚರಣೆಗಳು, ಕೃಷಿಯ ಮಹತ್ವ ಹಾಗೂ ರೈತರ ಶ್ರಮ ಮತ್ತು ಸಮಾಜಕ್ಕೆ ಅವರು ನೀಡುವ ಅಮೂಲ್ಯ ಕೊಡುಗೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮೆಲ್ಸ್ಟನ್ ರೋಡ್ರಿಗಸ್ ಬಲ್ಲಾನ್ ಅವರು ಕೃಷಿಯ ಮಹತ್ವ, ರೈತರ ಬದುಕಿನ ಸವಾಲುಗಳು ಮತ್ತು ಆಹಾರ ಭದ್ರತೆಯಲ್ಲಿ ರೈತರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ 18 ಕೆ.ಎ.ಆರ್. ಬ್ಯಾಟಲಿಯನ್, ಮಂಗಳೂರು ಎನ್‌ಸಿಸಿ ವಿದ್ಯಾರ್ಥಿಗಳು, ಕಾಲೇಜಿನ ಸಂಯೋಜಕರಾದ ಡಾ. ಸ್ಮಿತಾ ಡಿ.ಕೆ, ಕ್ಯಾಪ್ಟನ್ ಶಕಿನ್ ರಾಜ್, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ಗದ್ದೆ ನಾಟಿಯ ಅನುಭವವನ್ನು ಪಡೆದುಕೊಂಡರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮತ್ತು ರೈತರ ಶ್ರಮದ ಕುರಿತು ಗೌರವದ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
Post a Comment