ಬೆಳ್ತಂಗಡಿ : ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದ ಮಹಿಳೆಯ ಮನೆಯಲ್ಲಿದ್ದ ಸುಮಾರು ₹7.98 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾಡಿಯಲ್ಲಿ ನಡೆದಿದೆ.
ಕನ್ಯಾಡಿ ನಿವಾಸಿ ಜಯಶ್ರೀ (32) ಅವರು ನೀಡಿದ ದೂರಿನ ಪ್ರಕಾರ, ಜೂನ್ 20ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಕೀಯನ್ನು ಮನೆಯ ಸಮೀಪದಲ್ಲೇ ಇಟ್ಟು ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಮರಳಿದಾಗ ಮನೆಯ ಕೋಣೆಯಲ್ಲಿದ್ದ ಗೋದ್ರೆಜ್ ಅಲ್ಮಾರಿಯ ಬಾಗಿಲು ತೆರೆದಿದ್ದು, ಕೋಣೆಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಗಮನಿಸಿದ್ದಾರೆ.
ಪರಿಶೀಲಿಸಿದಾಗ ಮನೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಬಂಗಾರದ ಆಭರಣಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ₹7,98,000 ಎಂದು ತಿಳಿದುಬಂದಿದೆ.
ಈ ಕುರಿತು ಜಯಶ್ರೀ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 70/2026ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 331(3) ಹಾಗೂ 305ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Tags
ಬೆಳ್ತಂಗಡಿ