ಬ್ರಹ್ಮಾವರದಲ್ಲಿ ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ; ಆರೋಪಿ ರಿಕ್ಷಾ ಚಾಲಕ ಬಂಧನ

ಬ್ರಹ್ಮಾವರ: ಹಣಕಾಸಿನ ವಿಚಾರವಾಗಿ ಉಂಟಾದ ವಿವಾದ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಪ್ರಮೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹಣದ ವಿಚಾರಕ್ಕೆ ಜಗಳ; ರಾಡಿನಿಂದ ಹಲ್ಲೆ :
ಸುಜಿತ್ ಪಿಂಟೊ, ರಿಕ್ಷಾ ಚಾಲಕ ಪ್ರಮೋದ್‌ಗೆ ಹಣ ಪಾವತಿಸಲು ಬಾಕಿ ಇದ್ದುದೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್, ಸುಜಿತ್‌ನನ್ನು ತಾನು ಇದ್ದ ಸ್ಥಳಕ್ಕೆ ಬರುವಂತೆ ಕರೆದಿದ್ದನು. ಅಲ್ಲಿಗೆ ಬಂದ ಸುಜಿತ್ ಮತ್ತು ಪ್ರಮೋದ್ ಮದ್ಯದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಆಕ್ರೋಶಗೊಂಡ ಪ್ರಮೋದ್, ಕಬ್ಬಿಣದ ರಾಡಿನಿಂದ ಸುಜಿತ್‌ನ ತಲೆಗೆ ಹೊಡೆದಿದ್ದು, ಇದರಿಂದ ಸುಜಿತ್ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಜಿತ್ :
ಸುಜಿತ್ ಪಿಂಟೊ ವಿರುದ್ಧ ಈ ಹಿಂದೆಯೂ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣದಲ್ಲೂ ಸುಜಿತ್ ಆರೋಪಿಯಾಗಿದ್ದನು.

ಸ್ಥಳಕ್ಕೆ ಪೊಲೀಸರ ಭೇಟಿ :
ಮೂಲತಃ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ವಾಸವಾಗಿದ್ದ ಸುಜಿತ್ ಪಿಂಟೊ, ಕೆಲ ವರ್ಷಗಳ ಹಿಂದೆ ಬ್ರಹ್ಮಾವರಕ್ಕೆ ಸ್ಥಳಾಂತರಗೊಂಡಿದ್ದನು. ಕೊಲೆ ನಡೆದ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Post a Comment

Previous Post Next Post