ಮಂಗಳೂರು: ತಾಯಿ ಮತ್ತು ಶಿಶು ಆರೋಗ್ಯ ಸೇವೆಯಲ್ಲಿ ಗುಣಮಟ್ಟದ ಸಾಧನೆ ಮಾಡುತ್ತಾ ಬಂದಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. 2025-26ನೇ ಸಾಲಿನಲ್ಲಿ ಕಾನೂನುಬದ್ಧ ಗರ್ಭಪಾತ ಹಾಗೂ ಗರ್ಭಪಾತಾನಂತರದ ಆರೈಕೆಯಲ್ಲಿ ಶೂನ್ಯ ತಾಯಿ ಮರಣ ಪ್ರಮಾಣ ದಾಖಲಿಸುವ ಮೂಲಕ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದ್ದು, ರಾಜ್ಯಮಟ್ಟದ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ಪ್ರಶಸ್ತಿಗೆ ಆಯ್ಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಸಾಧನೆ ಗುರುತಿಸಲ್ಪಟ್ಟಿದೆ. 2025-26ನೇ ಸಾಲಿನಲ್ಲಿ ಆಸ್ಪತ್ರೆಯಲ್ಲಿ ಒಟ್ಟು 304 ಗರ್ಭಪಾತ ಪ್ರಕರಣಗಳನ್ನು ನಿರ್ವಹಿಸಲಾಗಿದ್ದು, ಪ್ರತಿಯೊಂದು ಪ್ರಕರಣದಲ್ಲೂ ಗುಣಮಟ್ಟದ ಸಮಗ್ರ ಗರ್ಭಪಾತ ಆರೈಕೆ (Comprehensive Abortion Care) ಕಾರ್ಯಕ್ರಮದ ನಿಯಮಗಳನ್ನು ಪಾಲಿಸಲಾಗಿದೆ. ಈ ಮೂಲಕ ಶೂನ್ಯ ತಾಯಿ ಮರಣ ಪ್ರಮಾಣ ದಾಖಲಿಸಿರುವುದು ಆಸ್ಪತ್ರೆಯ ಸಾಧನೆಯಾಗಿದೆ.
304 ಗರ್ಭಪಾತ ಪ್ರಕರಣಗಳ ನಿರ್ವಹಣೆ :
2025-26ನೇ ಸಾಲಿನಲ್ಲಿ ಆಸ್ಪತ್ರೆಯಲ್ಲಿ ನಿರ್ವಹಿಸಲಾದ ಪ್ರಕರಣಗಳ ವಿವರ ಹೀಗಿದೆ:
- 9 ವಾರಗಳ ಒಳಗಿನ ಗರ್ಭಪಾತ – 191
- 10ರಿಂದ 12 ವಾರಗಳ ಅವಧಿ – 31
- 12ರಿಂದ 20 ವಾರಗಳ ಅವಧಿ – 52
- 20ರಿಂದ 24 ವಾರಗಳ ಅವಧಿ – 25
- 24 ವಾರಗಳ ನಂತರ – 5
ಒಟ್ಟು 304 ಪ್ರಕರಣಗಳು :
ಇದರ ಜೊತೆಗೆ, ಶೇ.95ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಅವುಗಳ ನಿರಂತರ ಅನುಸರಣೆಗೆ ಉತ್ತೇಜನ ನೀಡಿರುವುದು ಆಸ್ಪತ್ರೆಯ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ.
ಆಧುನಿಕ ಚಿಕಿತ್ಸಾ ವ್ಯವಸ್ಥೆಯಿಂದ ಮಹತ್ವದ ಸಾಧನೆ : ಆಸ್ಪತ್ರೆಯಲ್ಲಿ ಅಳವಡಿಸಿಕೊಂಡಿರುವ ವಾಟ್ಸಾಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಸೂತಿ ತೀವ್ರ ನಿಗಾ ಘಟಕ, ಪ್ರಸೂತಿ ಕ್ರಿಟಿಕಲ್ ಕೇರ್ ಘಟಕ ಹಾಗೂ ಹೈರಿಸ್ಕ್ ಪ್ರೆಗ್ನೆನ್ಸಿ ಡೆಲಿವರಿ ಘಟಕಗಳು ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ವಿವಿಧ ಸಂಘ-ಸಂಸ್ಥೆಗಳ ಸಿಎಸ್ಆರ್ ಅನುದಾನದ ಮೂಲಕ ಸಂಗ್ರಹಿಸಲಾದ ಅತ್ಯಾಧುನಿಕ ಜೀವ ರಕ್ಷಕ ಉಪಕರಣಗಳು ಕೂಡ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ನೆರವಾಗಿವೆ.
ಈ ಸಾಧನೆ ಕುರಿತು ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್., ಯಶಸ್ಸಿಗೆ ಕಾರಣರಾದ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅರಿವಳಿಕೆ ವಿಭಾಗ, ರೇಡಿಯೋ ಡಯಾಗ್ನೋಸಿಸ್ ವಿಭಾಗ ಹಾಗೂ ನವಜಾತ ಶಿಶು ವಿಭಾಗದ ತಜ್ಞ ವೈದ್ಯರನ್ನು ಅಭಿನಂದಿಸಿದರು.
ಶುಶ್ರೂಷಕ ವೃಂದ, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದವರ ಸೇವೆಯನ್ನೂ ಅವರು ಶ್ಲಾಘಿಸಿದರು. ಆರೋಗ್ಯ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಮಾಜಮುಖಿ ಸಂಘ-ಸಂಸ್ಥೆಗಳು ನೀಡಿದ ಸಹಕಾರವನ್ನು ಸ್ಮರಿಸಿದರು.
ಆಸ್ಪತ್ರೆಗೆ ದೊರೆತಿರುವ ಈ ಗೌರವದ ಸ್ಥಾನಮಾನವನ್ನು ಉಳಿಸಿಕೊಂಡು, ನಿರಂತರವಾಗಿ ಗುಣಮಟ್ಟದ ಸೇವೆ ಒದಗಿಸುವ ಮೂಲಕ ತಾಯಂದಿರ ಬದುಕಿನಲ್ಲಿ ಆಶಾಕಿರಣವಾಗಲು ಎಲ್ಲರೂ ಬದ್ಧತೆಯಿಂದ ಶ್ರಮಿಸಬೇಕು ಎಂದು ಅವರು ಹೇಳಿದರು.
Post a Comment