ಮಂಗಳೂರು : ಅಪಸ್ಮಾರ (ಮೂರ್ಛೆ ರೋಗ) ಶಾಪವಲ್ಲ, ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ನುರಿತ ವೈದ್ಯರ ಸಲಹೆಯಿಂದ ನಿಯಂತ್ರಿಸಿ ಗುಣಪಡಿಸಬಹುದಾದ ಖಾಯಿಲೆಯಾಗಿದೆ ಎಂದು ಬೆಂಗಳೂರು ಮೂಲದ ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಕ ಡಾ. ನಿಹಾಲ್ ಅಹಮದ್ ಹೇಳಿದರು.
ಭಾರತೀಯ ವೈದ್ಯರ ಸಂಘದ ಮಂಗಳೂರು ಶಾಖೆ ಹಾಗೂ ಸ್ಪರ್ಶ ಆಸ್ಪತ್ರೆಯ ಸಹಯೋಗದಲ್ಲಿ ಆ. 29ರಂದು ನಗರದ ಹೋಟೆಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ವೈದ್ಯಕೀಯ ಕಾರ್ಯಾಗಾರದಲ್ಲಿ ಅತಿಥಿ ಉಪನ್ಯಾಸ ನೀಡಿದ ಅವರು, ಅಪಸ್ಮಾರದ ಕುರಿತು ಗ್ರಾಮೀಣ ಹಾಗೂ ಜನಸಾಮಾನ್ಯರಲ್ಲಿ ಇರುವ ಮೂಢನಂಬಿಕೆಗಳನ್ನು ದೂರಗೊಳಿಸುವ ಅಗತ್ಯವಿದೆ ಎಂದರು.
ಮೆದುಳಿನ ನರಕೋಶಗಳಲ್ಲಿನ ಅಸಮತೋಲನ, ಹಾನಿ ಅಥವಾ ನರಗಳ ದೌರ್ಬಲ್ಯದಿಂದ ಅಪಸ್ಮಾರ ಉಂಟಾಗಬಹುದು. ದೇಶದಲ್ಲಿ ಸುಮಾರು 1.2 ಕೋಟಿ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಗೆ ಒಳಗಾದರೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಅವರು ತಿಳಿಸಿದರು.
ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಬಾಲಾಜಿ ಅವರು ಅಪಸ್ಮಾರಕ್ಕೆ ಕಾರಣವಾಗುವ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು. ದೀರ್ಘಕಾಲಿಕ ಮದ್ಯಸೇವನೆ, ಅತಿಯಾದ ಧೂಮಪಾನ, ನಿದ್ರಾಹೀನತೆ, ತಲೆಗೆ ಗಾಯ, ಅನುವಂಶಿಕ ಅಂಶಗಳು, ದೈಹಿಕ ವ್ಯಾಯಾಮದ ಕೊರತೆ, ಪೌಷ್ಟಿಕ ಆಹಾರದ ಕೊರತೆ ಹಾಗೂ ಬದಲಾದ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳು ರೋಗಕ್ಕೆ ಕಾರಣವಾಗಬಹುದು ಎಂದು ವಿವರಿಸಿದರು. ಅಪಸ್ಮಾರದ ಲಕ್ಷಣಗಳು, ಅಪಾಯಗಳು ಮತ್ತು ಲಭ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಅವರು ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಡಾ. ನಿಹಾಲ್ ಅಹಮದ್ ಹಾಗೂ ಡಾ. ಬಾಲಾಜಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಅವರು ಮಾತನಾಡಿ, ಕಾರ್ಯಾಗಾರಕ್ಕೆ ಶುಭ ಹಾರೈಸಿದರು. ಗೌರವ ಅತಿಥಿಯಾಗಿ ನಗರದ ಖ್ಯಾತ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್ ಭಾಗವಹಿಸಿ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಹಾಗೂ ಲಾಭಾಂಶಗಳ ಕುರಿತು ಅತಿಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಗಲಿದ ಮಾಜಿ ಅಧ್ಯಕ್ಷ ದಿವಂಗತ ರಾಜೇಶ್ ಬಲ್ಲಾಳ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ದಾನ್ಹಾ, ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಕಾಶ್ ಹಾಗೂ ಸ್ಪರ್ಶ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ಅಮೃತೇಶ್ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಶ್ರೀಮತಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
Post a Comment