Mangalore | ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ, ನಾರಾಯಣ ಗುರು ಜಯಂತಿ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸ್ಥಾಪನಾಚಾರ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜಾ ಸಂಭ್ರಮ ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಭಕ್ತಿಭಾವದಿಂದ ನಡೆಯಿತು.

ಬೆಳಗ್ಗೆ 8.45ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬೆಳಗ್ಗೆ 9ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಕಲಶ ಪ್ರತಿಷ್ಠಾಪನೆ ಹಾಗೂ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ವರಮಹಾಲಕ್ಷ್ಮೀ ಪೂಜೆ ಹಾಗೂ ನಾರಾಯಣ ಗುರುಗಳ ಜನ್ಮದಿನ ಒಂದೇ ದಿನ ಬಂದಿರುವುದು ಅಪರೂಪವಾಗಿದ್ದು, ಈ ದಿನ ವಿಶೇಷ ಮಹತ್ವ ಪಡೆದುಕೊಂಡಿದೆ. ನೂರಾರು ಮಹಿಳೆಯರು ಪಾಲ್ಗೊಂಡು ಸಾಮೂಹಿಕವಾಗಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.

ಈ ಸಂದರ್ಭ ವಿಶ್ವ ಬಿಲ್ಲವ ಮಹಿಳಾ ಸಂಘದ ಸಂಸ್ಥಾಪಕಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್ ಮಾತನಾಡಿ, “ವರಮಹಾಲಕ್ಷ್ಮೀ ಪೂಜೆ ಮಹಿಳೆಯರು ಭಕ್ತಿಯಿಂದ ಆಚರಿಸುವ ವಿಶೇಷ ಪೂಜೆಯಾಗಿದೆ. ಕಳೆದ 21 ವರ್ಷಗಳಿಂದ ದೇಗುಲದಲ್ಲಿ ನಿರಂತರವಾಗಿ ವರಮಹಾಲಕ್ಷ್ಮೀ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಮಹಿಳಾ ಮಂಡಳಿಯ ಸರ್ವ ಮಹಿಳೆಯರು ಒಗ್ಗೂಡಿ ಈ ಬಾರಿ ಪೂಜೆಯನ್ನು ನೆರವೇರಿಸಿದ್ದಾರೆ” ಎಂದರು.

ಗೋಕರ್ಣನಾಥ ದೇಗುಲದ ಮಾಜಿ ಟ್ರಸ್ಟಿ ರವಿಶಂಕರ್ ಮಿಜಾರ್ ಮಾತನಾಡಿ, “ಶ್ರೀ ನಾರಾಯಣ ಗುರುಗಳ ಜನ್ಮದಿನೋತ್ಸವ ಹಾಗೂ ವರಮಹಾಲಕ್ಷ್ಮೀ ಪೂಜೆ ಒಂದೇ ದಿನ ಬಂದಿರುವುದು ಈ ದಿನದ ವಿಶೇಷತೆ. ನೂರಾರು ಮಹಿಳೆಯರ ಭಾಗವಹಿಸುವಿಕೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ನಾರಾಯಣ ಗುರುಗಳ ವಿಶೇಷ ಪೂಜೆಗಳು ಸಂಪನ್ನಗೊಂಡಿವೆ” ಎಂದು ಶುಭ ಹಾರೈಸಿದರು.

ಕ್ಷೇತ್ರಾಡಳಿತ ಮಂಡಳಿ ಟ್ರಸ್ಟಿ ಹಾಗೂ ಮಾಜಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಟ್ರಸ್ಟಿ ಜಗದೀಪ್ ಡಿ. ಸುವರ್ಣ ಸೇರಿದಂತೆ ಕ್ಷೇತ್ರಾಡಳಿತ ಮಂಡಳಿ ಸದಸ್ಯರು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಸರ್ವಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರಮಹಾಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮಹಿಳೆಯರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

Post a Comment

Previous Post Next Post