ಮಂಗಳೂರು : ನಗರದ ಕೊಟ್ಟಾರ ಕ್ರಾಸ್ ಬಳಿ ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ತಮ್ಮನೇ ಅಣ್ಣನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ತಡರಾತ್ರಿ ನಡೆದಿದ್ದು, ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮೃತರನ್ನು ಅಡಿವೆಪ್ಪ (40) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿಯನ್ನು ಅವರ ತಮ್ಮ ರಾಜು (36) ಎಂದು ಗುರುತಿಸಲಾಗಿದೆ.
ಇವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾಗಿದ್ದು, ಕೊಟ್ಟಾರ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಇಬ್ಬರೂ ವಿಪರೀತ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ.
ಭಾನುವಾರ ತಡರಾತ್ರಿ ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ಅಡಿವೆಪ್ಪ ಮತ್ತು ರಾಜು ನಡುವೆ ಗಲಾಟೆ ನಡೆದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಬಳಿಕ ರಾಜು ಚೂರಿಯಿಂದ ಅಡಿವೆಪ್ಪಗೆ ಇರಿದಿದ್ದಾನೆ ಎನ್ನಲಾಗಿದೆ.
ಅಡಿವೆಪ್ಪ ಅವರ ತಾಯಿ ಗೂಡಂಗಡಿ ವ್ಯಾಪಾರ ಮಾಡಿಕೊಂಡಿದ್ದು, ರಾತ್ರಿ ಮನೆಗೆ ವಾಪಸ್ ಬಂದಾಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು.
ಘಟನೆ ಕುರಿತು ಮಾಹಿತಿ ಪಡೆದ ಉರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Post a Comment